ಪಿಕ್ರಿಕ್ ಆಮ್ಲ -
ನೈಟ್ರೋಕ್ರಿಯಾಗುಂಪು ಇರುವ ಹಳದಿ ಬಣ್ಣದ ಸ್ಫ್ಪಟಿಕಾಕಾರದ, ಸ್ಫೋಟಕ ಕಾರ್ಬನಿಕ ಸಂಯುಕ್ತ. ಪಿಕ್ರಿಕ್ ಆಮ್ಲಕ್ಕೆ ನಾಮಕರಣ ಮಾಡಿದವ ಜೆ. ಬಿ. ಎ. ಡ್ಯುಮಸ್. ಪಿಕ್ರೋಸ್ ಎಂದರೆ ಗ್ರೀಕ್ ಭಾಷೆಯಲ್ಲಿ ಅತ್ಯಂತ ಕಹಿ ಎಂದರ್ಥ. ಈ ಆಮ್ಲದ ಹಳದಿ ಬಣ್ಣದ ಜಲ ದ್ರಾವಣ ಅತ್ಯಂತ ಕಹಿ. ಪಿಕ್ರಕ್ ಆಮ್ಲದ ಸಾಮಾನ್ಯ ಹೆಸರು 2,4,6- ಟ್ರೈನೈಟ್ರೊಫಿನೋಲ್. ಇದರ ಅಣು ಸೂತ್ರ OHC6H2(NO2)3.

ತಯಾರಿಕೆ : ಪಿಕ್ರಿಕ್ ಆಮ್ಲವನ್ನು ಮೊದಲ ಬಾರಿಗೆ 1771ರಲ್ಲಿ ಪಿ. ವೂಲ್ಫ್ ಎಂಬಾತ ನೀಲಿಯ ಮೇಲೆ ನೈಟ್ರಿಕ್ ಆಮ್ಲ ವರ್ತಿಸುವಂತೆ ಮಾಡಿ ತಯಾರಿಸಿದ. ಕೈಗಾರಿಕಾ ವಿಧಾನದಲ್ಲಿ ಫಿನೋಲನ್ನು ಸಲ್ಫ್ಯೂರಿಕ್ ಆಮ್ಲದೊಡನೆ 1200ಸೆ.ಗೆ ಕಾಸಿದಾಗ ಫಿನೋಲ್ ಸಲ್ಫೋನಿಕ್ ಆಮ್ಲ ಉಂಟಾಗುತ್ತದೆ. ಈ ಸಂಯುಕ್ತಕ್ಕೆ ಮೊದಲು 00 ಸೆ. ಯಲ್ಲಿ ಅನಂತರ 1000 ಸೆ. ಯಲ್ಲಿ 70% ನೈಟ್ರಿಕ್ ಆಮ್ಲವನ್ನು ಹಾಕಿದಾಗ ಟ್ರೈನೈಟ್ರೋಫಿನೋಲ್ ತೈಲ ರೂಪದಲ್ಲಿ ಸಿಗುತ್ತದೆ. ಇದು ತಣಿದಾಗ ಹರಳುಗಟ್ಟುವುದು. ಹರಳುಗಳಲ್ಲಿರುವ ಆಮ್ಲಗಳನ್ನು ತೆಗೆಯಲು ಅವನ್ನು ನೀರಿನಿಂದ ತೊಳೆದು, ಅನಂತರ ಕುದಿಯುವ ನೀರಿನಲ್ಲಿ ವಿಲೀನಿಸಿ ಮತ್ತಷ್ಟು ಶುದ್ಧೀಕರಿಸಬಹುದು. ಇನ್ನೊಂದು ಅಗ್ಗವಾದ ವಿಧಾನದಲ್ಲಿ ಕ್ಲೋರೋಬೆನ್‍ಜಿóೀನನ್ನು ಸಾರ ನೈಟ್ರಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಮಿಶ್ರಣದೊಂದಿಗೆ ವರ್ತಿಸುವಂತೆ ಮಾಡಿದಾಗ 2,4,- ಡೈನೈಟ್ರೊಕ್ಲೋರೋಬೆನ್‍ಜಿóನ್ ಉಂಟಾಗುತ್ತದೆ. ಇದನ್ನು ಸೋಡಿಯಮ್ ಕಾರ್ಬೊನೇೈಟಿನ ಜಲ ದ್ರಾವಣದಿಂದ ಜಲ ವಿಶ್ಲೇಷಣೆಗೊಳಿಸಿದಾಗ 2-4-ಡೈನೈಟ್ರೊ ಫಿನೋಲ್ ಸಂಯುಕ್ತವೂ ಇದು ನೈಟ್ರಿಕ್ ಆಮ್ಲದೊಡನೆ ವರ್ತಿಸಿದಾಗ ಪಿಕ್ರಿಕ್ ಆಮ್ಲವು ಉಂಟಾಗುತ್ತದೆ.

ಗುಣಗಳು : ಪಿಕ್ರಿಕ್ ಆಮ್ಲ ತಣ್ಣೀರಿನಲ್ಲಿ ಅಲ್ಪ ಮೊತ್ತದಲ್ಲಿ ಆದರೆ ಬಿಸಿನೀರಿನಲ್ಲಿ ಅಧಿಕ ಮೊತ್ತದಲ್ಲಿ ವಿಲೀನವಾಗುವುದು. ಆಗ ಸಿಗುವ ಹಳದಿ ಬಣ್ಣದ ದ್ರಾವಣದಿಂದ, ಅದರ ಸಾರತೆಯನ್ನು ಹೊಂದಿಕೊಂಡು, ಅತ್ಯಂತ ತೆಳ್ಳಗಿನ ಫಲಕಗಳಂತಿರುವ ಅಥವಾ ಸೂಜಿ ಆಕಾರದಲ್ಲಿರುವ ಹಳದಿ ಬಣ್ಣದ ಸ್ಫಟಿಕಗಳನ್ನು ಪಡೆಯಬಹುದು. ಪಿಕ್ರಕ್ ಆಮ್ಲ 1220 ಸೆ. ಉಷúತೆಯಲ್ಲಿ ದ್ರವಿಸುತ್ತದೆ; ಮೆಲ್ಲನೆ ಬಿಸಿ ಮಾಡಿದಾಗ ಉತ್ಪತನಗೊಳ್ಳುತ್ತದೆ; ಬೇಗನೆ ಬಿಸಿ ಮಾಡಿದಾಗ ತೀವ್ರ ಜ್ವಾಲೆಯೊಡನೆ ಉರಿದು ಹೋಗುತ್ತದೆ.

ಪಿಕ್ರಿಕ್ ಆಮ್ಲ ಫಿನೋಲಿಗಿಂತ ಹೆಚ್ಚು ಶಕ್ತಿಯುತವಾದ ಆಮ್ಲ. ಇದು ಕಾರ್ಬೊನೇಟುಗಳನ್ನು ವಿಭಜಿಸುತ್ತದೆ. ಇದನ್ನು ಕ್ಷಾರಗಳೊಡನೆ ಕ್ರಿಯೆಗೆ ಒಳಪಡಿಸಿ ಗಾತ್ರಾನುಮಾಪಾನ (ಟೈಟ್ರೇಶನ್) ಮಾಡಬಹುದು. ಪಿಕ್ರಿಕ್ ಆಮ್ಲ ಕಾರ್ಬನಿಕ ಕ್ಷಾರಗಳೊಡನೆ ಸ್ಫಟಿಕಾಕಾರದ ಲವಣಗಳನ್ನು ಕೊಡುವುದರಿಂದ, ಈ ಕ್ಷಾರಗಳನ್ನು ಪ್ರತ್ಯೇಕಿಸಲು ಸಹಾಯಕವಾಗುತ್ತದೆ. ಇದು ನ್ಯಾಫ್ತಲೀನ್, ಆ್ಯಂಥ್ರಸೀನ್, ಫಿನಾಂಥೀನ್ ಮುಂತಾದ ಹಲವು ವರ್ತುಲಗಳುಳ್ಳ ಆ್ಯರೊಮ್ಯಾಟಿಕ್ ಹೈಡ್ರೋಕಾರ್ಬನ್ನುಗಳ ಮೇಲೆ ವರ್ತಿಸಿ ವರ್ಣಯುಕ್ತ ಹಾಗೂ ವಿವಿಧ ಸ್ಥಿರತೆಯ ಅಣುಸಂಕಲನ ಸಂಕೀರ್ಣಗಳನ್ನು (ಮ್ಯಾಲಿಕ್ಯೂಲರ್ ಅಡಿಷನ್ ಕಾಂಪ್ಲೆಕ್ಸಸ್) ಉಂಟು ಮಾಡುತ್ತದೆ. ಮಿಶ್ರಣಗಳಿಂದ ಹೈಡ್ರೊಕಾರ್ಬನ್ನುಗಳನ್ನು ಪ್ರತ್ಯೇಕಿಸಲು, ಶುದ್ಧೀಕರಿಸಲು ಮತ್ತು ಗುರುತಿಸಲು ಇವುಗಳ ಸ್ಥಿರ ಸಂಕೀರ್ಣಗಳನ್ನು ಉಪಯೋಗಿಸಲಾಗುವುದು. ಈ ಸಂಕೀರ್ಣಗಳಿಂದ ಹೈಡ್ರೊಕಾರ್ಬನ್ನುಗಳನ್ನು ಕ್ರೊಮ್ಯಾಟೊಗ್ರಾಫಿಕ್ ವಿಶ್ಲೇಷಣೆಯಿಂದ ಪಡೆಯಬಹುದು.

ಉಪಯೋಗಗಳು: ಪಿಕ್ರಿಕ್ ಆಮ್ಲಕ್ಕೆ ಪೂತಿನಾಶಕ ಗುಣವಿರುವುದರಿಂದ ಇದನ್ನು ಸುಟ್ಟ ಗಾಯಗಳಿಗೆ ಹಚ್ಚುವ ಮುಲಾಮುಗಳಲ್ಲಿ ಸೇಸುತ್ತಾರೆ. ಮೂತ್ರ ಪರೀಕ್ಷೆಯಲ್ಲಿ ಇದರ ಉಪಯೋಗವಿದೆ. ಹಿಂದೆ ಪಿಕ್ರಿಕ್ ಆಮ್ಲವನ್ನು ಯುದ್ಧ ಸ್ಫೋಟಕವಾಗಿಯೂ ಉಣ್ಣೆ ಹಾಗೂ ರೇಷ್ಮೆ ಬಟ್ಟೆಗಳಿಗೆ ಕೊಡುವ ಬಣ್ಣವಾಗಿಯೂ ಉಪಯೋಗಿಸಲಾಗುತ್ತಿತ್ತು. ಆದರೆ ಈಗ ಈ ಕೆಲಸಗಳಿಗೆ ಇದಕ್ಕಿಂತ ಒಳ್ಳೆಯ ರಾಸಾಯನಿಕಗಳಿರುವುದರಿಂದ ಇದರ ಬಳಕೆ ತಪ್ಪಿದೆ.	         (ಕೆ.ಡಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ